ಬುಧವಾರ, ಏಪ್ರಿಲ್ 13, 2011

ಕೊಳ್ಳಿರೋ ಕೊಳ್ಳಿರಿ ಕನ್ನಡ ಅರ್ಥಾಂಗಿಗಳನ್ನು

ನಾವು ವಿನ್ಯಾಸ ಮಾಡಿದ ಅರ್ಥಾಂಗಿಗಳಷ್ಟೇ ಅಲ್ಲದೆ, ಇನ್ನೊಂದಿಷ್ಟು ಅರ್ಥಾಂಗಿಗಳನ್ನು ನೀವು "ಟೋಟಲ್ ಕನ್ನಡ"ದ  ಅಂಗಡಿಗಳಲ್ಲಿ ಕೊಳ್ಳಬಹುದು:

೧:
#೬೩೮  , ೩೧ನೇ ಅಡ್ಡ ರಸ್ತೆ,
೧೦ ಬಿ ಮುಖ್ಯ ರಸ್ತೆ  (ಪವಿತ್ರ ಹೋಟಲ್ ಎದುರುಗಡೆ ಗಲ್ಲಿ)
ಜಯನಗರ ೪ನೇ ಬ್ಲಾಕ್
ಬೆಂಗಳೂರು ೫೬೦  ೦೧೧

೨. ಗೋಪಾಲನ್ ಮಾಲ್, ಮೈಸೂರು ರಸ್ತೆ.
೩. ಅಂತರ್ ಜಾಲ ಅಂಗಡಿ :

http://shopping.totalkannada.ಕಂ/

೪.  ಫೋನ್  ಅಂಗಡಿ :

(೦೮೦)೪೧೪೬ ೦೩೨೫
೯೨೪೩೪ ೫೫೬೭೨


ಕನ್ನಡ ಸಕತ್!


ಶನಿವಾರ, ಏಪ್ರಿಲ್ 9, 2011

ಮಾಧ್ಯಮಗಳಲ್ಲಿ ನಮ್ಮ ಅರ್ಥಾಂಗಿಗಳು:

ಎಪ್ರಿಲ್ ೮,೨೦೧೧ರ ವಿಜಯನೆಕ್ಸ್ಟ್‌ದಲ್ಲಿ ಪ್ರಕಟವಾದ ಚಿತ್ರದಲ್ಲಿ ಪುನೀತ್ ಮತ್ತು ಇತರರು ನಮ್ಮ ಅರ್ಥಾಂಗಿಗಳನ್ನು ಹಾಕಿದ್ದಾರೆ:



ಫೆಬ್ರುವರಿ ೫,೨೦೧೧ರ ವಿಜಯಕರ್ನಾಟಕದಲ್ಲಿ:


ಫೆಬ್ರುವರಿ ೬,೨೦೧೧ರ ವಿಜಯಕರ್ನಾಟಕದಲ್ಲಿ: ( ನಮ್ಮನ್ನು ಬನವಾಸಿ ಬಳಗವೆಂದು ತಪ್ಪಾಗಿ ಬರೆದಿದ್ದಾರೆ, ಇರಲಿ)




ಫೆಬ್ರುವರಿ ೦೬, ೨೦೧೧ರ ಕನ್ನಡಪ್ರಭದಲ್ಲಿ :

ಭಾನುವಾರ, ಫೆಬ್ರವರಿ 6, 2011

ಶರಣು-ಶರಣಾರ್ಥಿಗಳು

ಮೂರುದಿನಗಳ ಸಮ್ಮೇಳನ ಮುಗಿದಿದೆ. ಮಾರಾಟವಾದ ಟೀಶರ್ಟುಗಳ ಲೆಕ್ಕ, ಮಾರಾಟದಿಂದ ಬಂದ ಹಣ, ಮಾರಾಟವಾಗದೇ ಉಳಿದ ಟೀಶರ್ಟುಗಳ ಲೆಕ್ಕ ಇನ್ನೂ ಆಗಬೇಕಿದೆ. ಮೊದಲ ದಿನ ಸಿಕ್ಕಾಪಟ್ಟೆ ರೇಗಾಡಿದ, ಮತ್ತು ಎರಡು-ಮೂರನೆ ದಿನ ನಾವು ನಿಯಮಬಾಹೀರವಾಗಿ ಪುಸ್ತಕ ಮಳಿಗೆಗಳಿಂದ ಟೀಶರ್ಟ್ ಮಾರಿದರೂ ಬಂದು ಕಿರಿಕಿರಿ ಮಾಡದ ( ಬಂದರೆ ನಮ್ಮ ಮಳಿಗೆಯ ಮಾಲಕರು ಕೊಡಬೇಕಾಗಿದ್ದ ನಾಲ್ಕು ಕುರ್ಚಿಗಳಲ್ಲಿ ಇನ್ನೆರೆಡೆಲ್ಲಿ ಎಂದು ದಬಾಯಿಸಲು ತಯಾರಾಗಿದ್ದರು, ಆ ಮಾತು ಬೇರೆ:-)) ಆ ಹಿರಿಯ ಜೀವಕ್ಕೆ, ಇಂದು ಒಂದು ಚಿಕ್ಕ ಕಾಣಿಕೆ ಕೊಟ್ಟು ಬಂದಿದ್ದೇವೆ- ಉಡಲು ಒಂದು ಟಿಶರ್ಟು. ಯಾವುದು ಅಂದಿರಾ ?






















ಎಂದಿನಂತೆ, ಮಾಡಿದ ಕಿತಾಪತಿಯ ಪ್ರಮಾಣ ಜಾಸ್ತಿ ಆಯಿತು ಎನಿಸಿದರೆ ಕ್ಷಮಿಸಿ ಬಿಡಿ..

ಶನಿವಾರ, ಫೆಬ್ರವರಿ 5, 2011

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ೧ನೇ ದಿನದ ಒಂದು ವರದಿ.

"ಏನ್ರಿ, ನಿಮಗೆ ಕನ್ನಡ ತಿಳಿಯೋದಿಲ್ವಾ ? ಎಷ್ಟು ಸಲ ಹೇಳ್ಬೇಕು ? ಈ ಪ್ರದರ್ಶನ ಮಳಿಗೆಗಳಲ್ಲಿ ಪುಸ್ತಕಗಳಿಗಾಗಿ ಮಾತ್ರ ಅವಕಾಶ. ನಿಮ್ಮ ಟೀ-ಷರ್ಟುಗಳಿಗೆ ಇಲ್ಲಿ ಜಾಗ ಇಲ್ಲಾ, ಇಲ್ಲಾ, ಇಲ್ಲಾ!" ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನನಗೆ ಶುರುವಾದದ್ದು, ಈ ಸುಪ್ರಭಾತದಿಂದ, ಹಾಡಿದವರು ಸಮ್ಮೇಳನದ ಮಳಿಗೆಗಳ ಜವಾಬ್ದಾರಿ ಹೊತ್ತ ಹಿರಿಯರು. ಅವರಿಗಾಗಲೇ ಕಸಾಪದ ಸಿಬ್ಬಂದಿ "ಐದು ಫೂಟೂ ಎರಡಿಂಚು ಎತ್ತರದ, ಕಪ್ಪು ಮೈಬಣ್ಣದ, ಕಣ್ಣಿಗೆ ಕನ್ನಡಕ, ಮೈಮೇಲೆ ಕನ್ನಡ ಅರ್ಥಾಂಗಿ ಹಾಕಿದ ಅಸಾಮಿ ಒಂದು ಬರುತ್ತದೆ" ಎಂದು ಹೇಳಿ "ಎಚ್ಚರ, ಎಚ್ಚರ, ಎಚ್ಚರ" ಎಂದು ವಾರ್ನಿಂಗ್ ಕೊಟ್ಟಿದ್ದರು ಅನಿಸುತ್ತದೆ. ಹೌದು, ಕಸಾಪದ ಸಿಬ್ಬಂದಿಗೆ ನಾನು ಹತ್ತು ಹಲವು ಸಲ "ಕನ್ನಡ ಅರ್ಥಾಂಗಿಗಳನ್ನು ಮಾಡಿ, ಸಮ್ಮೇಳನದಲ್ಲಿ ಮಾರಬೇಕು ಅಂತಿದ್ದೇವೆ, ಅದರ ಶುಲ್ಕ ತೆಗೆದು ಕೊಂಡು ದಯವಿಟ್ಟು ನಮಗೊಂದು ಮಳಿಗೆ ಕಾಯ್ದಿರಿಸಿ" ಎಂದು ಗೋಗರಿದಿದ್ದೆ. ನನ್ನ ಪ್ರತಿ ಗೋಗರೆತಕ್ಕೂ ಆ ಸಿಬ್ಬಂದಿ "ಮಳಿಗೆಗಳು ಪುಸ್ತಕಗಳಿಗೆ ಮಾತ್ರ. ಯಾವುದಾದರೂ ಮಳಿಗೆ ಖಾಲಿ ಉಳಿದರೆ ನಿಮಗೆ ಕೊಡಬಹುದು. ನೋಡೋಣ" ಎಂದಿದ್ದರು. ಕೊನೆಯ ಸಲ ಕೇಳಿದಾಗ ಮಾತ್ರ ಅವರು "ಸರ್, ನೀವೊಂದು ಕೆಲಸ ಮಾಡಿ. ಸಮ್ಮೇಳನದ ದಿನ ಬೆಳಿಗ್ಗೆ ಬೇಗ ಬಂದು ನಮ್ಮನ್ನು ಅಲ್ಲಿ ಕಾಣಿ. ನಿಮಗೊಂದು ಮಳಿಗೆ ಕೊಡೊಕೆ ಪ್ರಯತ್ನಿಸೋಣ" ಎಂದು ನನ್ನನ್ನು ಸಾಗಹಾಕಿದ್ದರು. ನಾನು ಅವರ ಮಾತನ್ನು ಅಗತ್ಯಕ್ಕಿಂತ ಹೆಚ್ಚು ಆಶಾಭಾವನೆಯಿಂದ ತೆಗೆದುಕೊಂಡದ್ದೇ, ಇಂದು ಬೆಳಿಗ್ಗೆ ನ್ಯಾಷನಲ್ ಕಾಲೇಜು ಮೈದಾನಕ್ಕೆ ಹೋಗಿ ಸುಪ್ರಭಾತ ಕೇಳಲು ಕಾರಣವಾಯ್ತು. ಮಳಿಗೆಗಳ ಜವಾಬ್ದಾರಿ ಹೊತ್ತ ಹಿರಿಯರಿಗೆ ಅದಾಗಲೇ ಮಳಿಗೆಗಳನ್ನು ಕಾಯ್ದಿರಿಸಿದವರು ಬಂದು "ನಮ್ಮ ಮಳಿಗೆಗಳಲ್ಲಿ ಕುರ್ಚಿ ಇಲ್ಲಾ, ಟೇಬಲ್ ಇಲ್ಲಾ" ಎಂದು ಕಿರಿಕಿರಿ ಮಾಡುತ್ತಿದ್ದರಿಂದ ಬಂದ ಕೋಪವನ್ನು ನನ್ನ ಮೇಲೆ ತೀರಿಸಿಕೊಂಡಿದ್ದರು ಅನಿಸುತ್ತೆ. ಅವರು ಇನ್ನಷ್ಟು ಸೌಜನ್ಯದಿಂದ ಮಾತನಾಡಬಹುದಿತ್ತು ಎನ್ನಿಸಿದರೂ, ದೊಡ್-ದೊಡ್ಡವರಿಂದ ಇಂಥ ಸಣ್ಣ-ಸಣ್ಣ ಸಂಗತಿಗಳು ನಡೆಯುತ್ತವೆ ಎಂದು ಜೋಲು ಮುಖ ಹಾಕಿ ಮುಂದೆ ನಡೆದೆ.
"ಕನ್ನಡ, ಯುವಜನತೆಯಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ" ಎಂದು ಬೊಬ್ಬೆ ಹೊಡೆಯುವ ಜನರೇ ಯುವಜನರ ನಡುವೆ ಕನ್ನಡ ಟೀ-ಶರ್ಟುಗಳನ್ನು ಜನಪ್ರಿಯ ಮಾಡಬೇಕೆನ್ನುವ ನಮ್ಮ ಸಣ್ಣ ಪ್ರಯತ್ನಕ್ಕೆ ಸಹಕರಿಸದಿರುವುದು ಕಂಡು ನಿರಾಶನಾಗಿ ಬರುತ್ತಿದ್ದೆ. ಆಗ ಕಂಡಿದ್ದೇ ಜಗದಗಲದ ನಗೆಹೊತ್ತ ಛಂದ ವಸುಧೇಂದ್ರರ ಮುಖ. ತಮ್ಮ ಕಾಯ್ದಿರಿಸಿದ್ದ ಮಳಿಗೆಯಲ್ಲಿನ ಟೇಬಲ್ಲು-ಕುರ್ಚಿಗಳನ್ನು ಬೇರ‍ಾರೋ ಎತ್ತಿಕೊಂಡು ಹೋಗಿದ್ದರಿಂದ, ತಾವು ಬೇರಾರದೋ ಮಳಿಗೆಯಿಂದ ತೆಗೆದುಕೊಂಡು ಬಂದಿದ್ದ ಸಂಗತಿಯನ್ನು ಹೇಳಿ, ಹಿಂದಿನ ಸಮ್ಮೇಳನ ಒಂದರಲ್ಲಿ ಹೀಗೆ ಮಾಡಿದಾಗ, ತಾವು ಎತ್ತಿಕೊಂಡು ಬಂದ ಮಳಿಗೆ ಮಾಲಕ ನಂತರ ಪರಿಚಯವಾಗಿ "ಯಾರೋ ಕಳ್ ನನ್ಮಕ್ಕಳು ನಂ ಕುರ್ಚಿ - ಟೇಬಲ್ ತಗೋಂಡು ಹೋಗ್ಯಾರು" ಮೂರೂ ದಿನವೂ ಬಯ್ದಿದ್ದನ್ನು ನೆನೆಸಿ ಕೊಂಡು ವಸುಧೇಂದ್ರ ಮತ್ತು ಅವರ ಬಳಗದ ರಮಾನಂದ ಕಾಮತರು ತಾವೂ ನಕ್ಕು , ನನ್ನ ಮೂಡನ್ನೂ ಸುಧಾರಿಸಿದರು. ನಂತರ ನನ್ನ ಕತೆಯನ್ನು ಸಹಾನುಭೂತಿಯಿಂದ ಕೇಳಿ, ಕಾರಿನಲ್ಲಿಯೇ ಟೀಶರ್ಟು ಮಾರುವ ನನ್ನ ಕೊನೆಯ ಮಾರ್ಗಕ್ಕೆ ಶುಭ ಹಾರೈಸಿದರು.
ನಾನೂ, ನನ್ನ ನಾಲ್ಕು ಜನ ಸ್ನೇಹಿತರು ರಸ್ತೆ ಬದಿಯಲ್ಲಿ ಕಾರಿನಲ್ಲಿಯೇ ಟಿ-ಶರ್ಟುಗಳನ್ನು ಇಟ್ಟು ದ್ವನಿವರ್ಧಕದಲ್ಲಿ ಕೇಳಿ ಬರುತ್ತಿದ್ದ ಮಾತು, ಜಗಳ, ಸಂಗೀತ, ಭಾಷಣಗಳನ್ನು ಕೇಳುತ್ತ, ಎಂಬಿಎ, ಇಂಜನಿಯರಿಂಗುಗಳಲ್ಲಿ ಕಲಿತಿದ್ದ ಹಲವು ತಂತ್ರಗಳನ್ನು ಉಪಯೋಗಿಸುತ್ತ, ಗೋಧೂಳಿಯ ವೇಳೆಗೆ ಮಾರಿದ ಟಿ-ಶರ್ಟುಗಳ ಸಂಖ್ಯೆಯನ್ನು ಶತಕದ ಸನಿಹಕ್ಕೆ ತಂದಿದ್ದೆವು. ಧೂಳಿ ಬಂದಿದ್ದು ನಿಜವಾಗಿದ್ದರೂ, ಅದು ಗೋವಿನದಾಗಿರದೇ, ಪೌರಕಾರ್ಮಿಕರು ಸಂಜೆ ರಸ್ತೆ ಗೂಡಿಸುತ್ತಿದ್ದರಿಂದುದಾಗಿತ್ತು. ಆವಾಗ ನಾವು ನಮ್ಮ ಕಾರಂಗಡಿಯನ್ನು ಮುಚ್ಚಿ, ಪುಸ್ತಕದ ಮಳಿಗೆಗಳ ಕಡೆ ನಡೆದೆವು.
"ಸಮ್ಮೇಳನದಲ್ಲಿ ಮಜ್ಜಿಗೆ ಮತ್ತು ನೀರು ಬಿಟ್ಟು ಬೇರೇನು ಮಾರಲು ಸಿಗುವುದಿಲ್ಲ" ಎಂಬ ಯಾರದೋ ಹೇಳಿಕೆಯನ್ನು ಪೇಪರಿನಲ್ಲಿ ಓದಿದ್ದ, "ಊಟದಲ್ಲಿ ಗಲಾಟೆಯಾಯ್ತಂತೆ" ಎಂದು ಸುದ್ದಿ ಕೇಳಿದ್ದ ನಾವು ಒಳಗಿನ ಜೀವಾತ್ಮಗಳೆಲ್ಲ ಈಗಾಗಲೇ ಹಸಿವೆಯಿಂದ ನಿತ್ರಾಣಗೊಂಡಿದ್ದಾವು ಎಂದು ಆತಂಕಗೊಂಡಿದ್ದೆವು. ನ್ಯಾಷನಲ್ ಕಾಲೇಜು ಮೈದಾನಕ್ಕೆ ಒಳಕ್ಕೆ ಕಾಲಿಟ್ಟಾಗ ನಮಗೊಂದು ಸಂತಸದ ಆಶ್ಚರ್ಯಕಾದಿತ್ತು. ಒಳಗೆ ಮಾಲ್ಟು-ಬೇಕರಿ ತಿನಿಸುಗಳನ್ನು ಮಾರುವ ಭವ್ಯ ಮಳಿಗೆಯೇ ಭುವಿಯಿಂದ ಎದ್ದು ನಿಂತಿತ್ತು. ಪುಸ್ತಕದ ಮಳಿಗೆಗಳಲ್ಲಿ ನಮಗೆ ಇನ್ನಷ್ಟು ಆಶ್ಚರ್ಯಗಳು ಕಾದಿದ್ದವು. ಸಕಲ ವಿಷಯಗಳಲ್ಲಿಯೂ ಕನ್ನಡವು ಕಾಣಿಸಲಿ ಎಂದು ಆಶಿಸುವ ನನಗೆ ಸುಂದರ ಕನ್ನಡ ಗ್ರೀಟಿಂಗ್ ಕಾರ್ಡುಗಳ ಅಂಗಡಿಯನ್ನು ನೋಡಿ ಸ್ವರ್ಗವೇ ಕಂಡಷ್ಟು ಖುಷಿ. "ಪುಸ್ತಕಗಳು ಮಾತ್ರ, ಪುಸ್ತಕಗಳು ಮಾತ್ರ" ಎಂದು ಚಿರಾಡುವವರು ಈ ಸುಂದರ "ಚಿಟ್ಟೆ"ಗಳಿಗೆ ವೀಸಾ ಕೊಟ್ಟಿದ್ದಾರಲ್ಲಾ, ನಿನ್ನ ಕರುಣೆಗೆ ಎಲ್ಲೆ ಎಲ್ಲಿ ಎಂದು ದೇವರಿಗೆ ನಮಿಸಿದೆ. ಮುಂದೆ ಹೋದಾಗ ಎಸ್.ಬಿ.ಆಯ್ ನವರು ಹಾಕಿದ ಸುಂದರ ಮಳಿಗೆಯಲ್ಲಿ ಮನೆಸಾಲದ ಜಾಹೀರಾತುಗಳು ಕಂಡವು. ಈ ಎಸ್.ಬಿ.ಆಯ್.ನವರೇನು, ಪುಸ್ತಕ, ಅದೂ ಕನ್ನಡ ಪುಸ್ತಕ ಮಾರುದಿಲ್ಲವಲ್ಲ, ಇವರಿಗೆ ಅದ್ಯಾಕೆ ಮಳಿಗೆ ಸಿಕ್ಕಿತು ಎಂದು ವಿಸ್ಮಯಿಸುತ್ತಿರುವಾಗ, "ಅವರು ಚಕ್"ಬುಕ್ಕು", ಪಾಸ್"ಬುಕ್ಕು" ಮಾರತೇವಿ ಅಂಥೇಳಿ ಮಳಿಗೆ ತಗೋಂಡಿರಬೇಕು" ಎಂದು ಸ್ನೇಹಿತನೊಬ್ಬ ಸತರ್ಕ ಕಾರಣ ಕೊಟ್ಟ.
ಹಲವು ಪುಸ್ತಕದ ಮಳಿಗೆಗಳಲ್ಲಿ ಹತ್ತಾರು ಆಸಕ್ತಿಕರ ಪುಸ್ತಕಗಳನ್ನು ಕೊಳ್ಳುತ್ತಾ, ನಾವು ಬರುವಾಗ ನಮ್ಮ ಕಣ್ಣಿಗೆ ಬಿದ್ದದ್ದು ಒಂದು ಪೂಜಾಭಂಡಾರ. ಧಾರ್ಮಿಕ ಪುಸ್ತಕಗಳ ಜೊತೆಗೆ ಪೂಜಾ ಸಾಮಗ್ರಿಗಳನ್ನೂ ಮಾರುತ್ತಿದ್ದ ಆ ಅಂಗಡಿಗೆ "ಪುಸ್ತಕ, ಪುಸ್ತಕ,ಪುಸ್ತಕ, ಬೇರೆ ಮಾರಬೇಡ ವರ್ತಕ" ಮಂತ್ರ ಹೇಳುವವರು ಹೇಗೆ ಮಳಿಗೆ ಕೊಟ್ಟರೋ ಎಂದು ವಿಸ್ಮಯಿಸಿದೆವು. ಅದೇ ಸಮಯಕ್ಕೆ ವಾಚುಮಾರುವವನೂ ಒಬ್ಬ ನಮ್ಮ ಕಣ್ಣಿಗೆ ಬಿದ್ದ. ಮಳಿಗೆ ಸಿಗದ ನಮ್ಮ ಟೈಮೇ ಸರಿ ಇರಲಿಲ್ಲ ಎಂದು ಕೊಂಡು ನಾವು ಏನಾದರೂ ಉಪಾಯ ಮಾಡತೊಡಗಿದೆವು. ಆಗ ನಮ್ಮೂರಿನ ಪ್ರಕಾಶಕರೊಬ್ಬರು ತಮ್ಮ ಮಳಿಗೆಯ ಮೂಲೆಯಲ್ಲಿ ಕೆಲ ಕನ್ನಡ ಪುಸ್ತಕಗಳನ್ನು ನೆಲದ ಮೇಲೆ ಇಟ್ಟುಕೊಂಡು ಮಾರಲು ಯತ್ನಿಸುತ್ತಿದ್ದರು. ಅವರ ಮಳಿಗೆಯ ಬಹುತೇಕ ಖಾಲಿ ಇತ್ತು. ಅವರಿಗೆ "ನಿಮ್ಮ ಮಳಿಗೆಯಲ್ಲಿ ನಾನು ನಮ್ಮ ಕನ್ನಡ ಟಿ-ಶರ್ಟುಗಳನ್ನು ಮಾರಾಟ ಮಾಡಬಹುದಾ ? ಬೇಕಾದರೆ ನಾವು ಸ್ವಲ್ಪ ಬಾಡಿಗೆಯನ್ನೂ ಕೊಡುತೇವೆ" ಎಂದು ವಿನಂತಿಸಿದೆವು. ಅವರು ನಮ್ಮ ಮಾತಿಗೆ "ಯಾಕಾಗವಲ್ಲದು ಸರ. ನಿಮ್ಮ ಕಡಿಯಿಂದ ಬಾಡಿಗಿ ತಗೊಂಡು ನಾವು ಸಣ್ಣವರಾಗುದು ಬ್ಯಾಡ. ಆದರ, ಅದರೌನ್ ಟೇಬಲ್ ಬರತಾವಂತ ಮುಂಜೆನಿಯಿಂದ ಕಾಯಕತ್ತೇವಿ ಇನ್ನೂ ಬಂದಿಲ್ಲ. ಅದಕ್ಕ ಟೇಬಲ್ಲದ್ದೋಂದು ನಮಗ ಯವಸ್ಥಾ ಮಾಡಿ ಕೊಡ್ರಿ" ಎಂದರು. ನಾವು ಮನೆಯಿಂದ ಒಂದು ಟೇಬಲ್ ತಂದು ಅವರ ಪುಸ್ತಕ ಇಟ್ಟುಕೊಳ್ಳುವದಕ್ಕೆ ವ್ಯವಸ್ಥೆ ಮಾಡಿ ಕೊಡುವ ಆಶ್ವಾಸನೆ ಕೊಟ್ಟು, ಅವರ ಮಳಿಗೆಯಲ್ಲಿ ನಮ್ಮ ಟಿ-ಶರ್ಟು ಮಾರುವ ವ್ಯವಸ್ಥೆ ಮಾಡಿಕೊಂಡೆವು.
ಆದರೂ ಬೆಳಿಗ್ಗೆ ನನಗೆ ಸಹಸ್ರಾರ್ಚನೆ ಮಾಡಿದ್ದ ಹಳೆಹುಲಿಗೆ ಹೇಳಿ ಅನುಮತಿ ತೆಗೆದುಕೊಂಡೇ ಬಿಡೋಣ ಎಂದು ಕೊಂಡು ಹುಲಿಯನ್ನು ಹುಡುಕಿದರೆ ಹುಲಿಯ ಪತ್ತೆಯೇ ಇಲ್ಲ. ಬೆಳಗಿನ ಅವರ ಕಚೇರಿಯಲ್ಲಿ ಈಗ ಮತ್ಯಾರೋ ಕುಳಿತು ಪುಸ್ತಕ/ಪತ್ರಿಕೆ ಮಾರಾಟ ಮಾಡುತ್ತಿದ್ದರು. ಮಳಿಗೆದಾರರ "ಟೇಬಲ್ ಕಳಿಸಿಕೊಡ್ರಿ, ಕುರ್ಚೆ ಬೇಕರಿ" ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಹುಲಿ ಜಾಗ ಖಾಲಿ ಮಾಡಿದೆ ಎಂದು ಕೊಂಡು ನಾವು ನಮ್ಮ ಕೆಲಸದಲ್ಲಿ ಮುಂದುವರಿದೆವು.

(ದೊಡ್ಡ ಸಮ್ಮೇಳನಗಳಲ್ಲಿ ಹಲವು ಅನಾನುಕೂಲಗಳು, ಆಭಾಸಗಳು ಆಗುವುದು ಸಹಜ, ಒಪ್ಪತಕ್ಕದ್ದೇ. ಈ ಬರಹದಲ್ಲಿ ನಮಗುಂಟಾದ ಅನಾನುಕೂಲಗಳ ಬಗ್ಗೆ ಒಂಚೂರು ಗೇಲಿ ಮಾಡಿದ್ದೇನೆ. ಗೇಲಿಯ ಪ್ರಮಾಣ ಜಾಸ್ತಿ ಆಯಿತು ಎನಿಸಿದರೆ ಕ್ಷಮಿಸಿ ಬಿಡಿ)

ಗುರುವಾರ, ಜನವರಿ 27, 2011

ಸಾಹಿತ್ಯ ಸಮ್ಮೇಳನ ವಿಶೇಷ ಅರ್ಥಾಂಗಿಗಳು


ಅರ್ಥಾಂಗಿಗಳು ಅಂದ್ರೆ ಅರ್ಥಪೂರ್ಣವಾಗಿರುವ ಅಂಗಿಗಳು - ಅಂದರೆ ಕನ್ನಡ ನುಡಿಮುತ್ತುಗಳನ್ನು ಬರೆದಿರುವಂಥಾ ಅಂಗಿಗಳು.ಎಲ್ಲರಿಗೂ ಅರ್ಥವಾಗೋ ಹಾಗೆ ಹೇಳಬೇಕೆಂದರೆ ’ಕನ್ನಡ ಮೆಸೇಜಿರುವ ಟಿಶರ್ಟು’ಗಳು.

ಬೆಂಗಳೂರಿನಲ್ಲಿ ಬರುವ ಶುಕ್ರವಾರದಿಂದ ಶುರುವಾಗುವ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ಅರ್ಥಾಂಗಿಗಳು ತಯಾರಾಗಿವೆ. ಈ ಅರ್ಥಾಂಗಿಗಳು ಎರಡು ತರಹಗಳಲ್ಲಿವೆ : ಕಾಲರ್ ಇರುವ ಅರ್ಥಾಂಗಿ ಮತ್ತು ದುಂಡು ಕತ್ತಿನ ಅರ್ಥಾಂಗಿ.

ಕಾಲರ್ ಇರುವ ಅರ್ಥಾಂಗಿಗೆ ಎದೆಯ ಮೇಲೆ "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ಎಂಬ ಘೋಷವಾಕ್ಯವಿದೆ. ಬೆನ್ನ ಮೇಲೆ "ಡಾ|ಕುವೆಂಪು", "ಡಾ|ಬೇಂದ್ರೆ" ಅಥವಾ "ಕೋಟ್-೧" ವಿನ್ಯಾಸಗಳಲ್ಲಿ ಒಂದು ವಿನ್ಯಾಸವಿದೆ.

ಉದಾಹರಣೆಗೆ "ಡಾ|ಕುವೆಂಪು" ವಿನ್ಯಾಸದ ಬಿಳಿ ಬಣ್ಣದ ಕಾಲರ್ ಇರುವ ಅರ್ಥಾಂಗಿ ಹೀಗಿದೆ:



ಮುಂಭಾಗ



ಹಿಂಭಾಗ
 


















ದುಂಡು ಕತ್ತಿನ ಅರ್ಥಾಂಗಿಗೆ ಮುಂಭಾಗದಲ್ಲಿ ಏಳು ವಿನ್ಯಾಸಗಳಲ್ಲಿ ಒಂದು ವಿನ್ಯಾಸವಿದೆ, ಹಿಂಬದಿಯಲ್ಲಿ ಯಾವುದೇ ವಿನ್ಯಾಸವಿಲ್ಲ.

 ಅರ್ಥಾಂಗಿ ವಿನ್ಯಾಸಗಳು:
೧. "ಡಾ|ರಾಜ್"





೨."ಡಾ|ವಿಷ್ಣು":


೩. "ಡಾ|ಬೇಂದ್ರೆ"


೪. "ಡಾ|ಕುವೆಂಪು" : ಮೇಲೆ ತೋರಿಸಿದೆ.
೫. "ಕೋಟ್-೧"

೬. "ಕೋಟ್-೨"

೭. "ಕೋಟ್-೩"


ಕೆಂಪು,ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಅರ್ಥಾಂಗಿಗಳು ಲಭ್ಯವಿವೆ.

ಕನ್ನಡದ ಜಾತ್ರೆಗೆ ಬರುವ ನೀವು, "ಮನಸಲ್ಲೂ ಕನ್ನಡ, ಮೈಮೇಲೂ ಕನ್ನಡ" ವನ್ನು ಧರಿಸಿಕೊಂಡು ಹೋಗಿ ಎಂಬ ಆಗ್ರಹ ನಮ್ಮದು.

(ಅರ್ಥಾಂಗಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೯೮೪೫೦೦೪೭೮೨ ಅಥವಾ ariveguru4u@gmail.com ಗೆ ಸಂಪರ್ಕಿಸಬಹುದು.)